ಪದವಿಗಾಗಿ ಮೂರು ವರ್ಷ ಕಾಲೇಜು
ಪ್ರಾಧ್ಯಾಪಕರು, ಗೆಳೆಯರು, ಓದು, ಓಡಾಟ.
ಮೂರು ತಾಸ ಪರೀಕ್ಷೆ, ಕೊನೆಗೆ ಪದವಿ
ಗುರಿಗಿಂತ ಪಯಣ ಸ್ವಾರಸ್ಯ - ಪೆದ್ದುಗುಂಡ
ಕದ್ದ ಮಿತ್ರರಿಗಾಗಿ ಬೆಣ್ಣೆ, ಪ್ರೇಮಕ್ಕಾಗಿ ಸೀರೆಗಳ;
ಭಾಮೆಗಾಗಿ ಪಾರಿಜಾತ, ರುಕ್ಮಿಣಿಗಾಗಿ ಅವಳನ್ನೇ ಕದ್ದ.
ಅಬಲರ ಹಿತರಕ್ಷಣೆಗಾಗಿ ಕಳುವಾದರೂ ಮಾಡೆಂಬೆ
ಕದ್ದು ಪರರಿಗಾಗಿ ದೇವ ತಾನಾದ - ಪೆದ್ದುಗುಂಡ
ಪುಟ್ಟ ಹರಿವಾಣದಿ ನೀರ ತುಂಬಿಡಲೇಕೆ ?
ಹಸಿ ಮೆಣಸ ಹುಡು ಹುಡುಕಿ ತಂದಿಡಲೇಕೆ ?
ಮಾತ ಪ್ರತಿ ಮಾತ ಕೇಳಲ್ ತವಕಿಸಲೇಕೆ ?
ಗಿಳಿಯು ಪಂಜರದೊಳಿಲ್ಲ - ಪೆದ್ದುಗುಂಡ