ಮಂಗಳವಾರ, ಡಿಸೆಂಬರ್ 30, 2008

ಪೆದ್ದುಗುಂಡನ ರಗಳೆ - ೧೪

ದಿನದ ಆಟೋಟದಿ ಮನ ಜಡವಾಯ್ತು
ಜೀವನಾನಂದ ಬುಗ್ಗೆ ಒಣಗಿ ಬರಿದಾಯ್ತು
ಹಳೆ ನೆನಪ ಹೊಸ ಮೆಲುಕು ಕಣ್ಣೀರ ತರಿಸೆ
ಬರಡು ಮನ ಹಸಿರಾಯ್ತು ! - ಪೆದ್ದುಗುಂಡ

ಬುಧವಾರ, ಡಿಸೆಂಬರ್ 24, 2008

ಪೆದ್ದುಗುಂಡನ ರಗಳೆ - ೧೩

ಜ್ಞಾನ ಬೀಜಕೆ ಇಚ್ಛೆಯ ನೀರೆರೆಯೆ
ಚಿತ್ತ ಭಿತ್ತಿಯಲಿ ಅರಿವು ಕುಡಿಯೊಡೆವುದು.
ಬೆಳೆದಂತೆ ಪಸರಿಸಿ ಬಿಳಲುಗಳ ಬಿಟ್ಟ
ಜ್ಞಾನ ವಿಶ್ವವಟ - ಪೆದ್ದುಗುಂಡ
--------------------------------
ಬಿಳಲು = ಬಿಳಲು ಬೇರು
ವಿಶ್ವವಟ = ವಿಶ್ವದಗಲ ಹಬ್ಬಿರುವ ವಟವೃಕ್ಷ

ಭಾನುವಾರ, ಡಿಸೆಂಬರ್ 14, 2008

ಪೆದ್ದುಗುಂಡನ ರಗಳೆ ೧೨

ಮೂಲಿಕೆ ಸಿಗದೆ ಪವನಸುತಗೆ ಪೇಚು
ಸಂಜೀವಿನಿ ಪರ್ವತವೆ ಸಮಸ್ಯೆಯಾಗೆ
ವಿರಾಟನಾಗಿ ಬೆಳೆದ, ಬೆಟ್ಟವನೆ ಕಿತ್ತೊಯ್ದ
ಸಮಸ್ಯೆಗಿಂತೆತ್ತರನಾಗು - ಪೆದ್ದುಗುಂಡ
--------------------------------------
ಪವನಸುತ = ವಾಯು ಪುತ್ರ (ಹನುಮಂತ)

ಪೆದ್ದುಗುಂಡನ ರಗಳೆ ೧೧

ಸಮುದ್ರವೆದುರಾಗೆ ಹನುಮ ನಿಂತನೆ?
ಬೆಟ್ಟ ಹೊರುವಾಗೆ ಅವ ಹಿಂಜರಿದನೆ?
ಎಲ್ಲ ಹಾದಿಗಳಲುಂಟು ಕೋಟಲೆಗಳು
ಅಡೆತಡೆಗೆ ಮಣಿಯದಿರು - ಪೆದ್ದುಗುಂಡ
----------------------------------
ಸಮುದ್ರವೆದುರಾಗೆ = ಸಮುದ್ರವು ಎದುರಾದಾಗ
ಅವ = ಅವನು

ಪೆದ್ದುಗುಂಡನ ರಗಳೆ ೧೦

ಕಾಸಗಲ ಅಕ್ಷಿ ಪಟದಿ ಕೋಟಿ ದೃಶ್ಯಗಳು
ಹಿಡಿಯ ಹೃದಯದಿ ಭಾವನೆಗಳ ಕಡಲು
ಭೌತ ಪರಿಧಿಯೊಳ್ ಭಾವಾನುಭವ ಅನಂತ
ಮಿತದೊಳಪರಿಮಿತ - ಪೆದ್ದುಗುಂಡ
-----------------------------
ಕಾಸಗಲ = ಕಾಸು ನಾಣ್ಯದಷ್ಟು ಅಗಲ
ಅಕ್ಷಿ ಪಟದಿ = ಕಣ್ಣಿನ ಪಟಲದಲ್ಲಿ (ರೆಟಿನಾ)
ಹಿಡಿಯ = ಹಿಡಿಯಷ್ಟು (ಮುಷ್ಟಿಯಷ್ಟು)

ಗುರುವಾರ, ಡಿಸೆಂಬರ್ 4, 2008

ಪೆದ್ದುಗುಂಡನ ರಗಳೆ - ೯

ನೆನಪ ಸಂದೂಕಿಗೆ ಬಹುಗಂಧ ಚಾವಿ
ಎಲ್ಲಿಂದಲೋ ತೇಲಿ ಬಂದ ವಾಸನೆಯ ಅಮಲು
ವರ್ಷಾಂತರದ ಮರೆವಿನಲ್ಲೂ ನೋವಿನ ಕದತೆರೆಯೆ
ಮತ್ತೆ ಕಾಡಿತು ನೆನಪು - ಪೆದ್ದುಗುಂಡ
-------------------------------------------------
ಸಂದೂಕು - ಪೆಟ್ಟಿಗೆ
ಬಹುಗಂಧ - ವಿವಿಧ ವಾಸನೆಗಳು
ಚಾವಿ = ಬೀಗದ ಕೈ

ಪೆದ್ದುಗುಂಡನ ರಗಳೆ - ೮

ಸಂಕಲ್ಪದಿಂ ಜೀವದ ಚಲನ ವಿಕಸಂಗಳು
ಶಯನ, ಪೋಷಣ, ಮಿಥುನ, ಭ್ರಮಣಂಗಳು
ಇಚ್ಛೆ ಪೂರ್ತಿಯಿಂ ತೃಪ್ತಿ, ಅದುವೇ ಮರಣ !
ಜೀವಸೆಲೆ ಅತೃಪ್ತ - ಪೆದ್ದುಗುಂಡ

ಬುಧವಾರ, ಡಿಸೆಂಬರ್ 3, 2008

ಪೆದ್ದುಗುಂಡನ ರಗಳೆ - ೭

ಅಸ್ಪಂದಿತ ಸ್ನೇಹಾನುರಾಗಗಳು
ಹೃದಿಂದುವಿನ ಕೇತು ರಾಹುಗಳು.
ಎದೆಯಿಂ ವಿಷ ಬೀಜ ಕಿತ್ತೊಗೆಯದಿರೆ,
ಮನಬನವು ಬರಡು - ಪೆದ್ದುಗುಂಡ

------------------------------------
ಅಸ್ಪಂದಿತ = ಪ್ರತಿಕ್ರಿಯೆ ದೊರಕದ
ಹೃದಿಂದು = ಹೃತ್ + ಇಂದು = ಎದೆಯ ಚಂದಿರ

ಪೆದ್ದುಗುಂಡನ ರಗಳೆ - ೬

ಪಾದಸ್ಪರ್ಶದಿ ಶಿಲೆ ಸಾಧ್ವಿಯಾದಲ್
ನಾಮಬಲದಿ ಶಿಲೆ ಜಲದಿ ತೇಲಲ್
ಅರ್ಧಾಂಗಿಯಿಂ ಅಗ್ನಿ ಪ್ರಮಾಣ ಬಯಸೆ
ಮನಸೇಕೆ ಕಲ್ಲಾಯ್ತು? - ಪೆದ್ದುಗುಂಡ