ಮಂಗಳವಾರ, ಮಾರ್ಚ್ 24, 2009

ಪೆದ್ದುಗುಂಡನ ರಗಳೆ - ೨೪

ಎಡವಿದಾ ಕಲ್ಲ ಹಳಿದು ಫಲವೇನು
ಕ್ರಮಿಸುವಾ ಹಾದಿ ಇದೆ ಇನ್ನೂ ದೂರ
ಸಮಯದಲಿ ಸಾವರಿಸಿ ಮುನ್ನುಗ್ಗು ಮರುಳೇ
ಗುರಿಯ ಮೇಲಿರಲಿ ಗಮನ - ಪೆದ್ದುಗುಂಡ

ಪೆದ್ದುಗುಂಡನ ರಗಳೆ - ೨೩

ಯಾವ ರಾಗದಿ ಯಾವ ರಸ ಒಸರುವುದೊ
ಆಲಿಸಿ ಮನ ದ್ರವಿಸುವುದು; ಕುಣಿವುದು, ತಣಿವುದು.
ಬುದ್ಧಿಗೆ ನಿಲುಕದ ಭಾವನೆಗಳ ವ್ಯವಹಾರವಿದು
ಭಾವ ಪಟಕ್ಕೆ ಸಂಗೀತ ಸೂತ್ರ - ಪೆದ್ದುಗುಂಡ

ಪೆದ್ದುಗುಂಡನ ರಗಳೆ - ೨೨

ಅಕ್ಷರ ತಿಳಿದೊಡೆ ಸರ್ವಜ್ಞನಾಗಲಾದೀತೇ?
ಬೊಗಸೆಯೊಂದು ಶರಧಿ ಬರಿದಾಗಿಸೀತೆ?
ಹೊಟ್ಟ ನುಂಡು ಅಕ್ಕಿಸವಿ ತಿಳಿಯಲಾದೀತೇ?
ಬಿಡು ಜ್ಞಾನ ದರ್ಪ - ಪೆದ್ದುಗುಂಡ

ಭಾನುವಾರ, ಮಾರ್ಚ್ 15, 2009

ಪೆದ್ದುಗುಂಡನ ರಗಳೆ - ೨೧

ಕದ್ದ ಮಿತ್ರರಿಗಾಗಿ ಬೆಣ್ಣೆ, ಪ್ರೇಮಕ್ಕಾಗಿ ಸೀರೆಗಳ;

ಭಾಮೆಗಾಗಿ ಪಾರಿಜಾತ, ರುಕ್ಮಿಣಿಗಾಗಿ ಅವಳನ್ನೇ ಕದ್ದ.

ಅಬಲರ ಹಿತರಕ್ಷಣೆಗಾಗಿ ಕಳುವಾದರೂ ಮಾಡೆಂಬೆ

ಕದ್ದು ಪರರಿಗಾಗಿ ದೇವ ತಾನಾದ - ಪೆದ್ದುಗುಂಡ

ಗುರುವಾರ, ಮಾರ್ಚ್ 12, 2009

ಪೆದ್ದುಗುಂಡನ ರಗಳೆ - ೨೦

ಪುಟ್ಟ ಹರಿವಾಣದಿ ನೀರ ತುಂಬಿಡಲೇಕೆ ?

ಹಸಿ ಮೆಣಸ ಹುಡು ಹುಡುಕಿ ತಂದಿಡಲೇಕೆ ?

ಮಾತ ಪ್ರತಿ ಮಾತ ಕೇಳಲ್ ತವಕಿಸಲೇಕೆ ?

ಗಿಳಿಯು ಪಂಜರದೊಳಿಲ್ಲ - ಪೆದ್ದುಗುಂಡ

ಭಾನುವಾರ, ಮಾರ್ಚ್ 8, 2009

ಪೆದ್ದುಗುಂಡನ ರಗಳೆ - ೧೯

ಮನದ ವ್ಯಾಪಾರ ಎಂದೂ ತಲೆಕೆಳಗು !
ಬೆಳಕ ಹಾದಿಗಿಂತ ಗವಿಯಂಕುಡೊಂಕೇ ಬೆಡಗು.
ದೊರೆತ ಸುಖಕ್ಕಿಂತ ಇಲ್ಲದರ ಕೊರಗೇ ನೆಚ್ಚಾಗೆ,
ಮನಕೆ ಕಣ್ಣೀರ ಹುಚ್ಚು - ಪೆದ್ದುಗುಂಡ