ಸೋಮವಾರ, ಮೇ 25, 2009

ಪೆದ್ದುಗುಂಡನ ರಗಳೆ - ೨೫

ಗೊಂಬೆ ಹೊಸತಿರಲು ತಾಸೊಂದರ ಆಟ,
ಬಳಿಕ ಅದ ಬಿಸುಟು ಮತ್ತೊಂದರ ಹಠ.
ಒಮ್ಮೆ ತಣಿದ ಆಸೆಯ ವಸ್ತುವಿನ್ನು ಸಾಕು;
ಆಸೆಯಮಲು ಕ್ಷಣಿಕ - ಪೆದ್ದುಗುಂಡ

ಮಂಗಳವಾರ, ಮಾರ್ಚ್ 24, 2009

ಪೆದ್ದುಗುಂಡನ ರಗಳೆ - ೨೪

ಎಡವಿದಾ ಕಲ್ಲ ಹಳಿದು ಫಲವೇನು
ಕ್ರಮಿಸುವಾ ಹಾದಿ ಇದೆ ಇನ್ನೂ ದೂರ
ಸಮಯದಲಿ ಸಾವರಿಸಿ ಮುನ್ನುಗ್ಗು ಮರುಳೇ
ಗುರಿಯ ಮೇಲಿರಲಿ ಗಮನ - ಪೆದ್ದುಗುಂಡ

ಪೆದ್ದುಗುಂಡನ ರಗಳೆ - ೨೩

ಯಾವ ರಾಗದಿ ಯಾವ ರಸ ಒಸರುವುದೊ
ಆಲಿಸಿ ಮನ ದ್ರವಿಸುವುದು; ಕುಣಿವುದು, ತಣಿವುದು.
ಬುದ್ಧಿಗೆ ನಿಲುಕದ ಭಾವನೆಗಳ ವ್ಯವಹಾರವಿದು
ಭಾವ ಪಟಕ್ಕೆ ಸಂಗೀತ ಸೂತ್ರ - ಪೆದ್ದುಗುಂಡ

ಪೆದ್ದುಗುಂಡನ ರಗಳೆ - ೨೨

ಅಕ್ಷರ ತಿಳಿದೊಡೆ ಸರ್ವಜ್ಞನಾಗಲಾದೀತೇ?
ಬೊಗಸೆಯೊಂದು ಶರಧಿ ಬರಿದಾಗಿಸೀತೆ?
ಹೊಟ್ಟ ನುಂಡು ಅಕ್ಕಿಸವಿ ತಿಳಿಯಲಾದೀತೇ?
ಬಿಡು ಜ್ಞಾನ ದರ್ಪ - ಪೆದ್ದುಗುಂಡ

ಭಾನುವಾರ, ಮಾರ್ಚ್ 15, 2009

ಪೆದ್ದುಗುಂಡನ ರಗಳೆ - ೨೧

ಕದ್ದ ಮಿತ್ರರಿಗಾಗಿ ಬೆಣ್ಣೆ, ಪ್ರೇಮಕ್ಕಾಗಿ ಸೀರೆಗಳ;

ಭಾಮೆಗಾಗಿ ಪಾರಿಜಾತ, ರುಕ್ಮಿಣಿಗಾಗಿ ಅವಳನ್ನೇ ಕದ್ದ.

ಅಬಲರ ಹಿತರಕ್ಷಣೆಗಾಗಿ ಕಳುವಾದರೂ ಮಾಡೆಂಬೆ

ಕದ್ದು ಪರರಿಗಾಗಿ ದೇವ ತಾನಾದ - ಪೆದ್ದುಗುಂಡ

ಗುರುವಾರ, ಮಾರ್ಚ್ 12, 2009

ಪೆದ್ದುಗುಂಡನ ರಗಳೆ - ೨೦

ಪುಟ್ಟ ಹರಿವಾಣದಿ ನೀರ ತುಂಬಿಡಲೇಕೆ ?

ಹಸಿ ಮೆಣಸ ಹುಡು ಹುಡುಕಿ ತಂದಿಡಲೇಕೆ ?

ಮಾತ ಪ್ರತಿ ಮಾತ ಕೇಳಲ್ ತವಕಿಸಲೇಕೆ ?

ಗಿಳಿಯು ಪಂಜರದೊಳಿಲ್ಲ - ಪೆದ್ದುಗುಂಡ

ಭಾನುವಾರ, ಮಾರ್ಚ್ 8, 2009

ಪೆದ್ದುಗುಂಡನ ರಗಳೆ - ೧೯

ಮನದ ವ್ಯಾಪಾರ ಎಂದೂ ತಲೆಕೆಳಗು !
ಬೆಳಕ ಹಾದಿಗಿಂತ ಗವಿಯಂಕುಡೊಂಕೇ ಬೆಡಗು.
ದೊರೆತ ಸುಖಕ್ಕಿಂತ ಇಲ್ಲದರ ಕೊರಗೇ ನೆಚ್ಚಾಗೆ,
ಮನಕೆ ಕಣ್ಣೀರ ಹುಚ್ಚು - ಪೆದ್ದುಗುಂಡ

ಶುಕ್ರವಾರ, ಜನವರಿ 9, 2009

ಪೆದ್ದುಗುಂಡನ ರಗಳೆ - ೧೮

ಪಗಡೆ ರಂಗದಿ ಎಲ್ಲವನು ಸೋತ
ರಣ ರಂಗದಿ ಗೆದ್ದ ಎಲ್ಲವನು.
ಅಲ್ಲಿ ಮಾನ, ಇಲ್ಲಿ ಜೀವನವೇ ಪಣ !
ಎರಡೂ ಜೂಜಿನಾಟ- ಪೆದ್ದುಗುಂಡ

ಪೆದ್ದುಗುಂಡನ ರಗಳೆ - ೧೭

ಸಂಸಾರ ಹಾಸಂಗಿ, ನೀ ಒಂದು ಕಾಯಿ
ವಿಧಿ ಬಿಟ್ಟ ದಾಳದಂತೆ ನಿನ್ನ ನಡೆ
ಹಾವ್ದೋರೆ ಹಿನ್ನಡೆ; ಏರು, ಏಣಿ ಬರಲು
ಜೀವನ ಪರಮಪದದಾಟ - ಪೆದ್ದುಗುಂಡ
-----------------------------------
ಹಾಸಂಗಿ = ಆಟದ ಹಾಸು
ಹಾವ್ದೋರೆ = ಹಾವು + ತೋರೆ = ಹಾವು ಎದುರಾದರೆ
ಪರಮಪದದಾಟ = ಪರಮಪದದ + ಆಟ = ಹಾವು ಏಣಿ ಆಟ

ಬುಧವಾರ, ಜನವರಿ 7, 2009

ಪೆದ್ದುಗುಂಡನ ರಗಳೆ - ೧೬

ಶಬ್ದದ ಹಂದರಕೆ ಭಾವನೆಯೆ ಹೊದಿಕೆ
ಆಲಿಪನ ಕಿವಿಯಲ್ಲಿ ಮತ್ತದು ನಗ್ನ!
ಅದಕಲ್ಲಿ ಹೊಸ ಭಾವ ತೊಡಿಸೆ
ಕೇಳುಗನ ಕಿವಿಯಂತೆ ಅರ್ಥ - ಪೆದ್ದುಗುಂಡ

ಮಂಗಳವಾರ, ಜನವರಿ 6, 2009

ಪೆದ್ದುಗುಂಡನ ರಗಳೆ - ೧೫

ಹೃದಯ ತಂತಿ ಮೀಟುವ ಗಂಧರ್ವ ಗೀತ
ಕಣಕಣದಿ ಆನಂದ ತುಡಿತ
ಮನದಾಳದ ನೂರು ಭಾವನೆಗಳ ಚಿಲುಮೆ
ಸಂಗೀತ ನಿಜ ಸ್ವರ್ಗ - ಪೆದ್ದುಗುಂಡ